ಫಿರಾಕ್ ಗೋರಖಪುರಿ
1896-1982. ಉರ್ದುಭಾಷೆಯ ಶ್ರೇಷ್ಠ ಕವಿ. ಜ್ಞಾನಪೀಠ ಪ್ರಶಸ್ತಿ ವಿಜೇತ (1969). ರಘುಪತಿ ಸಹಾಯ್ ಇವರ ನಿಜನಾಮ. ಫಿರಾಕ್ ಕಾವ್ಯನಾಮ. ಹುಟ್ಟಿದ್ದು ಗೋರಖಪುರದ ಕಾಯಸ್ಥ ಕುಟುಂಬವೊಂದರಲ್ಲಿ ಇವರ ತಂದೆ ಮುಂಶೀ ಗೋರಖಪ್ರಸಾದ ಇಬರತ್ ವಕೀಲರೂ ಕವಿಗಳೂ ಆಗಿದ್ದರು. ಇವರ ಪ್ರಾರಂಭಿಕ ಶಿಕ್ಷಣ ಗೋರಖಪುರದಲ್ಲಿ ನಡೆಯಿತು. ತಂದೆ ಸಾಯುವಾಗ ಮುವ್ವತ್ತು ಸಾವಿರ ರೂಪಾಯಿಯ ಸಾಲವಿತ್ತು. ತಂದೆ ಮಾಡಿದ ಸಾಲ ತೀರಿಸಿ ಸೋದರರಿಗೆ ವಿದ್ಯಾಭ್ಯಾಸ ಮಾಡಿಸಿದರು. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಇವರು ಕಾಲೇಜಿನಲ್ಲಿ ರಾನಡೆ ಮತ್ತು ಶೇಷಾದ್ರಿ ಪದಕಗಳನ್ನು ಪಡೆದು ವಿಕ್ರಮ ಸ್ಥಾಪಿಸಿದರು. ಅಲಹಾಬಾದ್ ಸೆಂಟ್ರಲ್ ಮ್ಯೋರ್ ಕಾಲೇಜಿನಲ್ಲಿ ಬಿ.ಎ. ಪರೀಕ್ಷೆಯಲ್ಲಿ ಯಶಸ್ಸಿನಿಂದ ತೇರ್ಗಡೆಯಾದರು.

	1920ರಲ್ಲಿ ಇವರು ಐ.ಸಿ.ಎಸ್. ಹುದ್ದೆಗೆ ಆರಿಸಲ್ಪಟ್ಟರು. ಆದರೆ ಸ್ವಾತಂತ್ರ್ಯ ಸಂಗ್ರಾಮದಿಂದ ಆಕರ್ಷಿತರಾದ ಇವರು ಚಳವಳಿಯಲ್ಲಿ ಭಾಗವಹಿಸಿ ಜೈಲು ಸೇರಿದರು. ಸೆರೆಮನೆಯಲ್ಲಿಯೇ ಇವರ ಕಾವ್ಯ ಪ್ರತಿಭೆ ಅರಳಿತು. ಅಲ್ಲಿ ಇವರಂತೆ ಜೈಲು ಸೇರಿದ ಹಲವಾರು ಹೆಸರಾಂತ ಕವಿಗಳನ್ನು ಭೇಟಿ ಮಾಡಿ ಸ್ಫೂರ್ತಿ ಪಡೆದರು. ಜೈಲಿನಿಂದ ಹೊರಬಂದ ಮೇಲೆ ಪಂಡಿತ ಜವಾಹರಲಾಲರು ಇವರನ್ನು ತಮ್ಮ ಆಪ್ತಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡರು. 1922ರಲ್ಲಿ ಪ್ರಿನ್ಸ್ ಆಫ್ ವೇಲ್ಸ್ ಭಾರತಕ್ಕೆ ಬಂದಾಗ ಅವರ ಆಗಮನವನ್ನು ಫಿರಾಕರು ಬಹಿಷ್ಕರಿಸಿ ಮತ್ತೆ ಸೆರೆಮನೆ ಸೇರಿದರು. 1927ರಲ್ಲಿ ಇವರು ಕಾಂಗ್ರೆಸ್ಸಿನಿಂದ ಶಿಕ್ಷಣಕ್ಷೇತ್ರಕ್ಕೆ ಪಾದಾರ್ಪಣ ಮಾಡಿದರು. ಅನಂತರ ಲಕ್ನೋದ ಕ್ರಿಶ್ಚನ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ನೇಮಕರಾದರು. 1930ರಲ್ಲಿ ಆಗ್ರಾ ವಿಶ್ವವಿದ್ಯಾಲಯದ ಎಂ.ಎ. ಪರೀಕ್ಷೆಗೆ ಕುಳಿತು ಆಂಗ್ಲಭಾಷೆಯಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆಯಾಗಿ ವಿಕ್ರಮ ಸ್ಥಾಪಿಸಿದರು. ಆಗ ಇವರಿಗೆ ಅಲಹಾಬಾದ್ ವಿಶ್ವವಿದ್ಯಾಲಯದಿಂದ ಪ್ರಾಧ್ಯಾಪಕ ಸ್ಥಾನಕ್ಕೆ ಕರೆ ಬಂದಿತು. ಅಂದಿನಿಂದ ನಿವೃತರಾಗುವ (1959)ವರೆಗೆ ಅಲ್ಲಿಯೇ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.

	ಫಿರಾಕರು ಬಹುಭಾಷಾಭಿಜ್ಞರು. ಇವರಿಗೆ ಸಂಸ್ಕøತ, ಹಿಂದಿ, ಉರ್ದು, ಪಾರಸಿ ಮತ್ತು ಇಂಗ್ಲಿಷ್ ಭಾಷೆಗಳ ಮೇಲೆ ಪ್ರಭುತ್ವವಿತ್ತು. ಹಲವು ಭಾಷೆಗಳ ಅಧ್ಯಯನ ಇವರ ವಿಚಾರ ಶಕ್ತಿಯನ್ನು ತೀವ್ರಗೊಳಿಸಿತು. ಫಿರಾಕರು ಅಲಹಾಬಾದ್‍ಗೆ ಬಂದಾಗ ಪ್ರಾಧ್ಯಾಪಕ ನಾಸಿರಿಯವರ ಪರಿಚಯವಾಯಿತು. ನಾಸಿರಿಯವರು ಫಿರಾಕರ ಗಜಲು (ಕವನ)ಗಳನ್ನು ತಿದ್ದಿ ಕವಿ ದೀಕ್ಷೆ ನೀಡಿದರು. ಇವರು ತಮ್ಮ ಬರಹದ ಬದುಕನ್ನು ಪ್ರಾರಂಭಿಸಿದಾಗ ಅಮೀರ್ ಮೀನಾ ಈ ಮತ್ತು ದಾಗರ ಪ್ರಾಬಲ್ಯ ಹೆಚ್ಚಾಗಿತ್ತು. ಮೊದಮೊದಲಿಗೆ ಇವರ ಗಜಲುಗಳಲ್ಲಿ ಈ ಕವಿಗಳ ಪ್ರಭಾವ ಕಂಡು ಬಂದರೂ ಫಿರಾಕರು ತಮ್ಮದೇ ಆದ ಒಂದು ಶೈಲಿಯನ್ನು ರೂಪಿಸಿಕೊಂಡಿದ್ದರು.

	ಫಿರಾಕರ ಮೊದಲ ನಜ್ಮ (ಗೀತೆ) 1920ರಲ್ಲಿ ನಗ್ಮಾಯೇ ಹರೇಕತ್ ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ನಗ್ಮ-ಎ-ಸಾಜ್; ಗಜಲಿಸ್ತಾನ್ (ಗಜಲುಗಳ ಸಂಕಲನ); ಶೇರಿಸ್ತಾನ (ಶೇರುಗಳ ಸಂಕಲನ); ಶಬನಮಿಸ್ತಾನ್; ರೂಹ್-ಎ-ಕಾಯನಾತ್ (ವಿಶ್ವಾತ್ಮಾ); ಮಶ ಅಲ್ (ದೀವಟಿಗೆ, ಮೇಣಬತ್ತಿ); ಶೋಲಾ ಎ-ಸಾಜ್; ಧರತಿ ಕೀ ಕರವಟ್; ಗುಲ್‍ಬಾಂಗ್; ರಮಜೋ ಕನಾಯಾತ್; ಗುಲ್ ಎ ನಗ್ಮಾ (ಗೀತ ಗುಲಾಬಿ)-ಇವು ಇವರ ಕೃತಿಗಳಲ್ಲಿ ಕೆಲವು. ಗುಲ್-ಎ-ನಗ್ಮಾ ಇವರ ಆಯ್ದ ಕವನಗಳ ಸಂಕಲನ. ಎಪ್ಪತ್ತು ಗಜಲು (ಕವನ)ಗಳು ಇಪ್ಪತ್ತು ನಜ್ಮಗಳು ಮತ್ತು ಅನೇಕ ದ್ವಿಪದಿಗಳು ಈ ಸಂಕಲನದಲ್ಲಿವೆ. ಫಿರಾಕರ ದರ್ಶನ, ಮತ್ತು ಕಾವ್ಯಕಲೆಯನ್ನು ಗುಲ್-ಎ-ನಗ್ಮಾ ಪ್ರತಿನಿಧಿಸುತ್ತದೆ. 1959ರಲ್ಲಿ ಪ್ರಕಟವಾದ ಗುಲ್-ಎ-ನಗ್ಮಾ 1952-60ರ ನಡುವೆ ಪ್ರಕಟವಾದ ಶ್ರೇಷ್ಠತಮ ಸೃಜನಾತ್ಮಕ ಕೃತಿಯೆಂದು ಪರಿಗಣಿಸಿ 1969ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿಯನ್ನು ಘೋಷಿಸಿತು. ಉರ್ದು ಭಾಷೆಯಲ್ಲಿ ಪ್ರಶಸ್ತಿ ಪಡೆದರು ಈವರೆಗೆ ಇವರೊಬ್ಬರೆ. ಗುಲ್-ಎ-ನಗ್ಮಾ ಆಯ್ದ ಕವಿತೆಗಳ ಸಂಕಲನ. ಕವಿಯ ಪ್ರಾತಿನಿಧಿಕ ಕೃತಿ. ಇದನ್ನು ಜೀವಂತವಾದ ಮಾನವ ಇತಿಹಾಸ ಎಂದೂ ವರ್ಣಿಸಲಾಗಿದೆ. ಫಿರಾಕರಿಗೆ ಸಂದ ಗೌರವಗಳಿಗೆ ಲೆಕ್ಕವಿಲ್ಲ. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಉತ್ತರ ಪ್ರದೇಶ ಸರ್ಕಾರದ ಬಹುಮಾನ, ನೆಹರೂ ಪ್ರಶಸ್ತಿ, ಪದ್ಮಭೂಷಣ, ಸಾಹಿತ್ಯ ಅಕಾಡೆಮಿಯ ಫೆಲೋಷಿಷ್ ಮೊದಲಾದವು ಇವರನ್ನು ಹುಡುಕಿಬಂದವು.

	ಫಿರಾಕ ಎಂದರೆ ವಿಯೋಗ, ವಿರಹ. ಇವರು ಹೆಚ್ಚು ಕಾಲ ವೈವಾಹಿಕ ಜೀವನ ಸಾಗಿಸಲಾಗಲಿಲ್ಲ. ಈ ವಿಯೋಗದ ಪ್ರಭಾವ ಇವರ ಸಾಹಿತ್ಯ ರಚನೆಯ ಮೇಲೆ ಆಳವಾಗಿ ಆಗಿದೆ. ಇವರು ಸ್ವಭಾವತಃ ಭಾವುಕರು. ಇವರ ಭಾವುಕತೆಯಲ್ಲಿ ಚಿಂತನ-ತತ್ತ್ವ ಮೇಳೈಸಿದೆ. ವಿಯೋಗದಂತೆಯೇ ವಿಕ್ಷಿಪ್ತತೆ ಕೂಡ ಇವರ ಸ್ವಭಾವದ ಅಭಿನ್ನ ಅಂಗವಾಗಿದೆ. ಇವರ ಶಾಯರಿ (ಕವಿತೆ) ಕೇವಲ ವ್ಯಕ್ತಿಗತ ಜೀವನದ ದಿನಚರಿಯಾಗಿಲ್ಲ. ಅಲ್ಲಿ ಸೃಷ್ಟಿಯ ಸೊಬಗನ್ನರಸುವ ನಿರಂತರ ಯತ್ನವಿದೆ; ಸತ್ಯ ಶೋಧನೆಯಿದೆ.

	ಫಿರಾಕರು ಆಧುನಿಕ ಉರ್ದು ಸಾಹಿತ್ಯದ ಶ್ರೇಷ್ಠ ಗಜಲ್‍ಗೋ (ಗಜಲ್‍ಲೇಖಕ) ಎಂದು ಹೆಸರಿಸಲ್ಪಡುತ್ತಾರೆ. ಅವರ ಪದಬಂಧ, ಹಿಂದಿ ಮತ್ತು ಉರ್ದುರೂಪಕಗಳ ಸುಂದರ ಸಮನ್ವಯ, ಪ್ರೇಮದ ಮನೋವೈಜ್ಞಾನಿಕ ಚಿತ್ರಣ ಮತ್ತು ಸೊಬಗನ್ನು ಬಣ್ಣಿಸುವ ಅಲೌಕಿಕ ಪ್ರತಿಭೆ ಓದುಗರ ಮನವನ್ನು ಸೆರೆಹಿಡಿಯುತ್ತದೆ. ಗಜಲ್ ನಜ್ಮ, ರೂಬಾಈ, ಈ ರಚನೆಗಳಲ್ಲಿ ಫಿರಾಕರಿಗೆ ಆಳವಾದ ಪರಿಶ್ರಮವಿದ್ದರೂ ಇವರು ಗಜಲ್ ಗೋ (ಗಜಲ್ ಲೇಖಕ)ರೆಂದೇ ಹೆಸರುವಾಸಿಯಾಗಿದ್ದಾರೆ. ಅರ್ಥಸೌಷ್ಠವ, ಕಲ್ಪನಾ ವಿಲಾಸ ಇವುಗಳಿಂದ ಕೂಡಿದ ಇವರ ಗಜಲ್‍ಗಳು ಉರ್ದುಸಾಹಿತ್ಯವನ್ನು ಶ್ರೀಮಂತಗೊಳಿಸಿವೆ. ತುಲಸೀರಾಮಾಯಣ ಮತ್ತು ಸೂರಸಾಗರದ ಪ್ರಭಾವ ಇವರ ಜೀವನ ಮತ್ತು ಸಾಹಿತ್ಯದ ಮೇಲೆ ಗಾಢವಾಗಿ ಆಗಿದೆ. ಇವರು ಜೀವನದ ಎಲ್ಲ ಗಂಭೀರ ಸಮಸ್ಯೆಗಳನ್ನೂ ತಮ್ಮ ಕೃತಿಗಳಲ್ಲಿ ಚರ್ಚಿಸಿದ್ದಾರೆ. ಕೆಲವರು ಇವರನ್ನು ಪ್ರಗತಿಶೀಲರೆಂದು ಕರೆಯುತ್ತಾರೆ. ಉರ್ದು ಸಾಹಿತ್ಯದಲ್ಲಿ ಇವರ ಸ್ಥಾನ ಉನ್ನತವಾದದ್ದು.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
											(ವಿ.ಡಿ.ಎಚ್.)